ಹುಣಿಸೆ
	ಲೆಗ್ಯುಮಿನೊಸೀ ಕುಟುಂಬದ ಟ್ಯಾಮರಿಂಡಸ್ ಇಂಡಿಕ ಪ್ರಭೇದದ ಮರ. ದುಂಡು ಹರವಿನ ನಿತ್ಯಹರಿದ್ವರ್ಣದ ಈ ಮರವನ್ನು ಸಾಲು ಮರವಾಗಿಯೂ ತೋಪುಗಳಲ್ಲಿಯೂ ಹಾಗೂ ಅರಣ್ಯ ಪ್ರದೇಶಗಳಲ್ಲೂ ವಿಶೇಷವಾಗಿ ಬೆಳೆಸುತ್ತಾರೆ. ಇದರ ಮೂಲಸ್ಥಾನ ಅಬಿಸೀನಿಯ ಹಾಗೂ ಮಧ್ಯ ಆಫ್ರಿಕ. ಹೊಸಚಿಗುರು ಮಾರ್ಚ್-ಏಪ್ರಿಲ್‍ನಲ್ಲಿ ಬಂದು ಸಣ್ಣಹಳದಿ ಕೆಂಪುಬಣ್ಣದ ಹೂಗಳು ಏಪ್ರಿಲ್-ಜೂನ್ ತಿಂಗಳಲ್ಲಿ ಮೂಡಿ, ಕಾಯಿಗಳು ಬರುವ ಫೆಬ್ರವರಿ-ಏಪ್ರಿಲ್‍ನಲ್ಲಿ ಮಾಗುವುವು. ಬೀಜಬಿತ್ತಿ ಇದನ್ನು ಸುಲಭವಾಗಿ ಬೆಳೆಸಬಹುದು. ಇದರ ಹಣ್ಣೇ ಅಡಿಗೆಗೆ ಸರ್ವಸಾಮಾನ್ಯವಾಗಿ ಬಳಸುವ ಹುಣಿಸೆಹಣ್ಣು. ಸಾಧಾರಣವಾಗಿ ಒಂದು ಮರಕ್ಕೆ ಸು. 150 ಕೆಜಿ ಮಾಗಿದ ಕಾಯಿ ದೊರಕಿ ಇವನ್ನು ಜಜ್ಜಿ ಬೀಜ ತೆಗೆದಲ್ಲಿ ಸು. 100 ಕೆಜಿ ಹಣ್ಣುಸಿಗುವುದು. ಅರ್ಧ ಮಾಗಿದ ಕಾಯಿನಿಂದ ಟಾರ್‍ಟಾರಿಕ್ ಆಮ್ಲವನ್ನೂ ತಯಾರಿಸುವುದಿದೆ. ಎಲೆಯಿಂದ ಒಂದು ಬಗೆಯ ಕೆಂಪು ಬಣ್ಣವನ್ನು ಪಡೆಯಬಹುದು. ಭಾರತೀಯ ಅಡುಗೆಯಲ್ಲಿ ಇದರ ಬಳಕೆ ವ್ಯಾಪಕ. ಆಹಾರಕ್ಕೆ ಹುಳಿರುಚಿ ಕೊಡಲು ಬಳಸುತ್ತಾರೆ. ಜೊತೆಗೆ ಚೌಬೀನೆ ಗಡುಸಾಗಿದ್ದು ಬಾಳಿಕೆ ಬರುವಂಥದಾಗಿದೆ. ಕೊಯಿತಕ್ಕೆ ಕಷ್ಟ. ಒನಕೆ, ಗಾಡಿಚಕ್ರದ ಭಾಗಗಳು ಈ ರೀತಿಯ ಶಕ್ತಿಯುತ ಉಪಕರಣಗಳಿಗೆ ಉಪಯುಕ್ತ. ಈ ಮರದ ಸೌದೆಗೆ ಹೆಚ್ಚು ಉಷ್ಣ ಜನಕ ಸಾಮಥ್ರ್ಯವಿರುವುದರಿಂದ ಉರುವಲಾಗಿ ವಿಶೇಷವಾಗಿ ಬಳಕೆಯಲ್ಲಿದೆ.		
(ಎ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ